EXCISE-ಅಬಕಾರಿ ಪೊಲೀಸರ ಕಾರ್ಯಾಚರಣೆ: 46 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ.....

 EXCISE - ಅಬಕಾರಿ ಪೊಲೀಸರ ಕಾರ್ಯಾಚರಣೆ: 46 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ.....




 ಬೆಂಗಳೂರು: ನಗರದ ಕೆಂಗೇರಿ, ಮಾಗಡಿ ರಸ್ತೆ ದಾಸರಹಳ್ಳಿ, ಕಾಮಾಕ್ಷಿಪಾಳ್ಯ ಮತ್ತು ಬಸವೇಶ್ವರ ನಗರದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಅಬಕಾರಿ ಇಲಾಖೆ ಪೊಲೀಸರು, ₹46.01 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.


ಬೆಂಗಳೂರು ಅಬಕಾರಿ ವಿಭಾಗ ಬಿಯುಡಿ-3ರ ವ್ಯಾಪ್ತಿಯಲ್ಲಿ ಇದೇ 29 ಮತ್ತು 30ರಂದು ಒಟ್ಟು ನಾಲ್ಕು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳು ಸುಂಕ ರಹಿತ (ಡ್ಯೂಟಿ ಫ್ರೀ) ಮದ್ಯ ಮತ್ತು ಸೇನಾ ಮದ್ಯವನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಮಾರಾಟದ ಸ್ಥಳ ಮತ್ತು ಮದ್ಯ ಸಂಗ್ರಹಿಸಿದ್ದ ಗೋದಾಮುಗಳ ಮೇಲೆ ದಾಳಿ ನಡೆಸಲಾಯಿತು ಎಂದು ಅಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.


ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನ ಮುನೇಶ್ವರ ಗುಡಿಯ ಬಳಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ, ಸ್ಕೂಟ‌ರ್ ಮತ್ತು 8.25 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ದಾಸರಹಳ್ಳಿಯ ರಹೇಜಾ ಪಾರ್ಕ್ ವಸತಿ ಸಮುಚ್ಚಯದ ಎದುರು ಮಾರಾಟ ಮಾಡುತ್ತಿದ್ದಾಗ ಸ್ಕೂಟರ್ ಮತ್ತು 7 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.


ಕಾಮಾಕ್ಷಿಪಾಳ್ಯದ ಶಾರದಾಂಭ ಪಿಜಿ ಕಟ್ಟಡದ ನೆಲಮಹಡಿಯಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿ 163 ಲೀಟ‌ರ್ ಮದ್ಯ, ಬಸವೇಶ್ವರನಗರದ ಮನೆಯೊಂದರಲ್ಲಿ 538 ಲೀಟರ್ ಸುಂಕರಹಿತ ವಿದೇಶಿ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದಿದೆ.


ಕಾರ್ಯಾಚರಣೆ ವೇಳೆ ಒಟ್ಟು 716.25 ಲೀಟರ್‌ನಷ್ಟು ಅಕ್ರಮ ಮದ್ಯ ಪತ್ತೆಯಾಗಿದೆ. ಮದ್ಯದ ಜತೆಗೆ ಎರಡು ದ್ವಿಚಕ್ರ ವಾಹನಗಳನ್ನು (₹1.60 ಲಕ್ಷ ಮೌಲ್ಯ) ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಮದ್ಯ ಮತ್ತು ವಾಹನಗಳ ಮೌಲ್ಯ ₹47.70 ಲಕ್ಷವಾಗುತ್ತದೆ. ಈ ಕಾರ್ಯಾರಣೆಯಿಂದ ರಾಜ್ಯ ಸರ್ಕಾರಕ್ಕೆ ಆಗಬಹುದಾಗಿದ್ದ ₹28 ಲಕ್ಷದಷ್ಟು ಸುಂಕ ನಷ್ಟವನ್ನು ತಪ್ಪಿಸಲಾಗಿದೆ ಎಂದು ಇಲಾಖೆ ಹೇಳಿದೆ.

Comments