ರೇಷ್ಮೆ ಹುಳು ಹಣ್ಣಾಗುವ ಸಂಧರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು;ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಕಂಗಾಲಾಗಿರುವ ರೈತರು ಈ ಸುದ್ದಿ ನೋಡಲೇ ಬೇಕು.......

ರೇಷ್ಮೆ ಹುಳು ಹಣ್ಣಾಗುವ ಸಂಧರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು;ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಕಂಗಾಲಾಗಿರುವ ರೈತರು ಈ ಸುದ್ದಿ ನೋಡಲೇ ಬೇಕು.......



ಚಳಿಗಾಲ ಮತ್ತು ಕಾಯಿಗೂಡು....

ನಮ್ಮ ರಾಜ್ಯದ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ವರ್ಷದಲ್ಲಿ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ದಿನಗಳನ್ನು ಹೊರತುಪಡಿಸಿ ಉಳಿದ 363 ದಿನಗಳೂ  ತೆರೆದಿದ್ದು ವಹಿವಾಟು ನಡೆಯುತ್ತದೆ. ಅದ್ಯಾವ  ಆತುರ ರೇಷ್ಮೆ ಬೆಳೆಗಾರರನ್ನು ಕಾಡುವುದೋ ಗೊತ್ತಿಲ್ಲ ಇನ್ನೂ ಮಾರುಕಟ್ಟೆಗೆ ಕಾಯಿಗೂಡು ತರುವುದನ್ನು ಬಿಟ್ಟಿಲ್ಲ. ಇದರಿಂದಾಗಿ ಉತ್ತಮ ಗುಣಮಟ್ಟಕ್ಕೆ ಬರಬಹುದಾಗಿದ್ದ ಗೂಡಿನ ಫಸಲನ್ನು ಕೈಯಾರೆ ಹಾಳು ಮಾಡಿಕೊಂಡು ಮಾರುಕಟ್ಟೆಯಲ್ಲಿ ಕೈ ಕೈ ಹಿಸುಕುತ್ತ ವ್ಯಥೆ ಪಡುವುದನ್ನು ನೋಡಬಹುದು. ಈ ರೀತಿಯ ದುಡುಕು ಮಾರುಕಟ್ಟೆಯ ವಹಿವಾಟಿನಲ್ಲಿ ವಿವಾದಕ್ಕೆ ಕಾರಣವಾಗುವುದು ಸರ್ವೇಸಾಮಾನ್ಯ.


   ಇದು ನಿಜವಾದ ಅರಿವಿನ ಕೊರತೆಯ ಫಲ.

ಚಳಿಗಾಲದಲ್ಲಿ ವಾತಾವರಣದ ಉಷ್ಣಾಂಶ ಕಡಿಮೆಯಿರುತ್ತದೆ. ಕಡಿಮೆ ಉಷ್ಣಾಂಶವಿರುವ ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ಮೊದಲನೇ ಪಾಕ್ಷಿಕ ವರೆಗೆ ಈ ಸಮಸ್ಯೆ ಮುಂದುವರಿಯುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೆಂದರೆ ರೇಷ್ಮೆಹುಳು ಶೀತರಕ್ತ ಗುಂಪಿಗೆ ಸೇರಿದ ಜೀವಿ. ಶೀತರಕ್ತ ಪ್ರಾಣಿಗಳಿಗೆ ಬದಲಾಗುವ ವಾತಾವರಣದ ಉಷ್ಣಾಂಶಕ್ಕೆ ತಮ್ಮ ದೇಹದ ಉಷ್ಣಾಂಶವನ್ನು ಹೊಂದಿಸುವ ಶಕ್ತಿ ಇಲ್ಲ. ಆದುದರಿಂದ ಇಂತಹ ಪ್ರಾಣಿಗಳ ದೇಹದಲ್ಲಿ ಕಡಿಮೆ ಉಷ್ಣಾಂಶದಲ್ಲಿ (ಚಳಿಗಾಲದಲ್ಲಿ) ಜೈವಿಕ ಕ್ರಿಯೆ ನಿಧಾನವಾಗುತ್ತದೆ ಹಾಗೂ ಹೆಚ್ಚಿದ ಉಷ್ಣಾಂಶದಲ್ಲಿ ( ಬೇಸಿಗೆಕಾಲ) ಚುರುಕು ಪಡೆಯುತ್ತದೆ. ಇದನ್ನು ರೇಷ್ಮೆ ಬೆಳೆಗಾರರು ಅರಿತು ಋತುಮಾನಕ್ಕೆ ಅನುಗುಣವಾಗಿ ತಮ್ಮ ಸಾಕಾಣಿಕೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.



ಕಾಯಿಗೂಡು ಎಂದರೇನು? 

ಸಂಪೂರ್ಣವಾಗಿ ಕೋಶಾವಸ್ಥೆಗೆ ತಲುಪದಿರುವ ಗೂಡು ಅಥವಾ ಇನ್ನೂ ನೂಲು ಸುತ್ತುತ್ತಿರುವ ಹುಳು ಇರುವ ಗೂಡು.




 ಕಾಯಿಗೂಡಿಂದ ಆಗುವ ತೊಂದರೆ ಏನು ? 

ರೀಲಿಂಗ್ ಹಾಗೂ ಬಿತ್ತನೆ ಎರಡು ಪ್ರಕಾರದ ಗೂಡಿನಲ್ಲೂ ಕಾಯಿ ಗೂಡನ್ನು ಕಳಪೆ ಗೂಡು ಎಂದೇ ಪರಿಗಣಿಸಲಾಗುತ್ತದೆ.

ರೀಲಿಂಗ್ ಗೆ ಉಪಯೋಗಿಸುವ ಗೂಡಿನಲ್ಲಿ ಕಾಯಿ ಗೂಡು ಮಿಶ್ರವಾಗಿದ್ದಲ್ಲಿ ರೀಲಿಂಗ್ ಪ್ರಕ್ರಿಯೆಯಲ್ಲಿ ನಿರೀಕ್ಷಿತ ರೀಲಿಂಗ್ ಗುಣವನ್ನು ತೋರಿಸುವುದಿಲ್ಲ ಹಾಗೂ ದಾರವು (ಬೇವ್) ಹೆಚ್ಚು ತುಂಡಾಗುವ ಸಂಭಾವ್ಯತೆ ಇರುತ್ತದೆ ಮತ್ತು ಇಂತಹ ಗೂಡುಗಳಿಂದ ವೇಸ್ಟ್ ಪ್ರಮಾಣ ಹೆಚ್ಚುತ್ತದೆ. ರೀಲರ್ಗಳಿಗೆ ನಿರೀಕ್ಷಿತ ಇಳುವರಿ (ರೆಂಡಿಟಾ) ಹಾಗೂ ಗುಣಮಟ್ಟದ ಕಚ್ಛಾ ರೇಷ್ಮೆ ಉತ್ಪಾದನೆಯಲ್ಲಿ ಹಿನ್ನಡೆಯಾಗಿ ನಷ್ಟವುಂಟಾಗುತ್ತದೆ. 

   ಬಿತ್ತನೆ ಗೂಡಿನ ಗುಣಮಟ್ಟವನ್ನು ಅಳೆಯುವ ಮೊದಲ ಮಾನದಂಡ ಒಂದು ಕೆಜಿ ಗೆ ಬರುವ ಜೀವಂತ ಪ್ಯೂಪದ (ಕೋಶ)ದ ಮೇಲೆ. ಕೋಶದ ಹಂತಕ್ಕೆ ಪರಿವರ್ತಿತವಾಗದಿರುವ , ನೂಲು ಸುತ್ತುತ್ತಿರುವ  ಹುಳುವಿರುವ ಗೂಡು ಬಿತ್ತನೆಗೆ ಸರ್ವಥಾ ಯೋಗ್ಯವಲ್ಲ. ಹುಳು ಕೋಶ ಪರಿವರ್ತನೆಯಾಗುವ ಹಂತದಲ್ಲಿ ತನ್ನ ರಕ್ಷಣೆಗಾಗಿ ತನ್ನ ಸುತ್ತ ಕಟ್ಟುವ ರಕ್ಷಣಾ ಕವಚವೇ ಗೂಡು. ರಕ್ಷಣಾ ಕವಚ ಸಂಪೂರ್ಣವಾಗದೇ ಗೂಡನ್ನು ಚಂದ್ರಿಕೆ ಯಿಂದ ಕಿತ್ತಾಗ ಹುಳು ಹಠಾತ್ತಾದ ಶಾಖ್ ಹೊಂದಿ ಗೂಡು ಕಟ್ಟುವ ಕೆಲಸದಿಂದ ವಿಮುಖರಾಗುತ್ತದೆ. ಯಾವಾಗ ರೇಷ್ಮೆ ದ್ರವ ಹುಳುವಿನ ದೇಹದಲ್ಲಿ , ರಕ್ತದಲ್ಲಿ (ಹೀಮೋಲಿಂಪ್) ಉಳಿಯಿತೋ ಅದು ವಿಷವಾಗುತ್ತದೆ ಹಾಗೂ ಅದರ ಪರಿಣಾಮ ಹುಳು ಸತ್ತು ಕರಗಿದ (ಮೆಲ್ಟ್ ) ಗೂಡಿಗೆ ಕಾರಣವಾಗುತ್ತದೆ. ಇದನ್ನೇ ವೈಜ್ಞಾನಿಕ ಭಾಷೆಯಲ್ಲಿ ಅಮೈನೋ ಅಸಿಡೇಮಿಯ ಎನ್ನುವುದು ಅಂದರೆ  ಸಂಪೂರ್ಣವಾಗಿ ರೇಷ್ಮೆ ಹುಳುವಿನ ದೇಹದಿಂದ ಹೊರ ಬರದಿದ್ದರೆ ಅದು ವಿಷವಾಗಿ ಪರಿಣಮಿಸುತ್ತದೆ. ಇದು ಹುಳು ಕೋಶದ ಸಾವಿಗೆ ಕಾರಣವಾಗುತ್ತದೆ. ಸತ್ತಕೋಶದ ಸಂಖ್ಯೆ ಹೆಚ್ಚಾದಷ್ಟೂ ಮೊಟ್ಟೆ ತಯಾರಕರಿಗೆ ನಷ್ಟ.

ಅದಕ್ಕೇ ಹೇಳುವುದು ಹುಳು ಹಣ್ಣಾಗುವ ಹಂತ ತುಂಬಾ ಸೂಕ್ಷ್ಮವಾದ ಹಂತ ಎಂದು.  ಚಾಕಿ ತಂದು 20-25 ದಿನ ಸಾಕಿ ಕೊನೆಯ ಹಂತದಲ್ಲಿ ಬೆಳೆ ಹಾಳು ಮಾಡಿಕೊಳ್ಳುವ, ಕಡಿಮೆ ದರ ಪಡೆಯುವ ಕೆಲಸ ನಡೆಯುವುದು ಅರಿವಿನ ಕೊರತೆಯಿಂದ.




ಹಾಗಾದರೆ ಕಾಯಿ ಗೂಡು ಇಲ್ಲದೆ ಗೂಡು ತರುವುದು ಹೇಗೆ ? 

ತುಂಬಾ ಸುಲಭ. ಗೂಡು ಬಿಡಿಸುವ ಮುನ್ನ ಸಿಬಿ (ಕೋಲಾರ್ ಗೋಲ್ಡ್)  ಹಾಗೂ ಮೈಸೂರು ಬಿತ್ತನೆ ತಳಿಯಲ್ಲಿ ಕೊನೆಯದಾಗಿ ಹಣ್ಣು ಹುಳು ಬಿಟ್ಟ ಚಂದ್ರಿಕೆಯಿಂದ ಮಾದರಿ ಗೂಡುಗಳನ್ನು ಸಂಗ್ರಹಿಸಿ ಹರಿತವಾದ ಬ್ಲೇಡ್ ಉಪಯೋಗಿಸಿ ಕತ್ತರಿಸಿ ಪರಿಶೀಲಿಸಬೇಕು. ಹುಳುವಿನ ಸ್ವರೂಪವಿದ್ದಲ್ಲಿ ಬಿಡಿಸಲು ಯೋಗ್ಯವಲ್ಲ ಎಂದು ತಿಳಿಯಬೇಕು. 

ದ್ವಿತಳಿಯಲ್ಲಿ ಪ್ಲಾಸ್ಟಿಕ್ ಚಂದ್ರಿಕೆ, ರೋಟರಿಚಂದ್ರಿಕೆ ಉಪಯೋಗಿಸುವವರು ಶೇ 2 ಚಂದ್ರಿಕೆಗಳಿಂದ ಗೂಡನ್ನು ಸಂಗ್ರಹಿಸಿ ಕತ್ತರಿಸಿ ಪರಿಶೀಲಿಸಬೇಕು. ಕಾಯಿಹುಳು ಇರುವ ಗೂಡನ್ನು ಬಿಡಿಸಲು ಉಪಕ್ರಮಿಸಬಾರದು. 

ಚಂದ್ರಿಕೆಯಲ್ಲಿರುವ ಗೂಡು ಪರೀಕ್ಷೆಗೆ ಗೂಡನ್ನು ಅಲ್ಲಾಡಿಸುವ ಕ್ರಮ ಸರಿಯಲ್ಲ. ನಾಜೂಕಾಗಿ ಒಳಗಿರುವ ಹುಳುವಿಗೆ ಗಾಯವಾಗದಂತೆ ಗೂಡನ್ನು ಹರಿತವಾದ ಬ್ಲೇಡ್ ನಿಂದ ಕತ್ತರಿಸಿ ಪರಿಶೀಲಿಸುವ ಕ್ರಮ ಒಳ್ಳೆಯದು.





ಹಾಗಾದರೆ ಹುಳು ಹಣ್ಣಾಗುವ ಸಂಧರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು ಏನು ?

* ಪ್ರತ್ಯೇಕ ಹಣ್ಣುಹುಳು ಮನೆ ಇದ್ದಲ್ಲಿ ಉತ್ತಮ. 


* ಸಾಮೂಹಿಕ ಹಣ್ಣು ಹುಳು ಮನೆಗಳಲ್ಲಿ ಗೂಡು ಕಟ್ಟಿಸುವವರು ಹೆಚ್ಚಾಗಿ ಕಾಯಿ ಗೂಡು ತರುವ ಸಂಭವ ಹೆಚ್ಚು 


* ಹಣ್ಣಾಗುವ ಹಂತದಲ್ಲಿಯೂ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಾಗಕೂಡದು. ಉಷ್ಣಾಂಶ ನಿರ್ವಹಿಸಲು ಎಲೆಕ್ಟ್ರಿಕ್ ಹೀಟರ್ ಗಳನ್ನು ಬಳಸಬೇಕು.


* ಸರಾಗ ಗಾಳಿ ಸಂಚಾರಕ್ಕೆ ಗಮನ ಹರಿಸಬೇಕು 


* ಹಣ್ಣು ಹುಳುಗಳನ್ನು ನಾಜೂಕಾಗಿ ಬಿದಿರಿನ ಚಂದ್ರಿಕೆಗಳಿಗೆ ಬಿಡಬೇಕು ಮತ್ತು ಬಿಡಿಸಬೇಕು .  ಕೈ ಹಾಗೂ ಚಂದ್ರಿಕೆಗಿರುವ ಅಂತರವನ್ನು ಗಮನಿಸಬೇಕು 


* ಬಿದಿರಿನ ಚಂದ್ರಿಕೆಗಳನ್ನು ಬಿಡಿಬಿಡಿಯಾಗಿ ನೇತು ಹಾಕುವುದು ಒಳ್ಳೆಯದು .


ಚಂದ್ರಿಕೆಗಳನ್ನು ಪ್ರತಿದಿನ ಒಳ ಹೊರಗೆ ಇಡುವುದನ್ನು ಮಾಡಕೂಡದು. 


* ಚಂದ್ರಿಕೆಗಳನ್ನು ಬಿಸಿಲಿಗೆ ಇಡಕೂಡದು 


* ಪ್ಲಾಸ್ಟಿಕ್ ಚಂದ್ರಿಕೆ ಹಾಕುವವರು ಖಡ್ಡಾಯವಾಗಿ ಸ್ಪಿನ್ನಿಂಗ್ ನೆಟ್ ಉಪಯೋಗಿಸಬೇಕು.


* ಪ್ಲಾಸ್ಟಿಕ್ ಚಂದ್ರಿಕೆಯನ್ನು  ಹಾಕಿದ ಮೂರು ದಿನದಲ್ಲೇ ಹಾಸಿಗೆಯಿಂದ ತೆಗೆಯುವ ಹಾಗೂ ಒರಟಾಗಿ ತೆಗೆದು ಹಾಕುವ ಅಭ್ಯಾಸವನ್ನು ಬಿಡಬೇಕು.


* ಚಂದ್ರಿಕೆಗಳಲ್ಲಿ ತೆಳುವಾಗಿ ಹುಳುಗಳನ್ನು ಬಿಡಬೇಕು.


                ಇಂತಹ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೇಷ್ಮೆ ಬೆಳೆಗಾರರು ಗೂಡಿನ ಗುಣಮಟ್ಟವನ್ನು ಕಾಪಾಡಲು ಸಾದ್ಯವಾಗುತ್ತದೆ ಮತ್ತು ಮಾರುಕಟ್ಟೆಗಳಲ್ಲಿ ವಿವಾದಕ್ಕೆ ಆಸ್ಪದವಿರುವುದಿಲ್ಲ.


            ಹುಳುವಿನ ಹಣ್ಣಾಗುವ ಹಂತ ರೇಷ್ಮೆ ಹುಳುವಿಗೆ ಮಾತ್ರ ಪರೀಕ್ಷೆಯಲ್ಲ , ರೇಷ್ಮೆ ಬೆಳೆಗಾರರಿಗೂ ಪರೀಕ್ಷೆಯ ಸಮಯವೇ. ಅರಿವು ಪಡೆಯುವುದೇ ಯಶಸ್ಸಿಗೆ ದಾರಿ.

            


ಕೆ ಎಸ್ ಕುಮಾರ ಸುಬ್ರಹ್ಮಣ್ಯ 

 ರೇಷ್ಮೆ ಉಪನಿರ್ದೇಶಕರು ಮತ್ತು ಪ್ರಧಾನಾಚಾರ್ಯರು, 

 ರೇಷ್ಮೆ ತರಬೇತಿ ಸಂಸ್ಥೆ, ಚನ್ನಪಟ್ಟಣ

Comments