ವಿದ್ಯಾರ್ಥಿಗಳ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ನೋಡಿಕೊಳ್ಳಲು ಮನಮ್ ಎಂಬ ವಿಶಿಷ್ಟ ಕಾರ್ಯಕ್ರಮ ಆರಂಭಿಸಿದ ಮಾಹೆ ಬೆಂಗಳೂರು
ವಿದ್ಯಾರ್ಥಿಗಳ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ನೋಡಿಕೊಳ್ಳಲು ಮನಮ್ ಎಂಬ ವಿಶಿಷ್ಟ ಕಾರ್ಯಕ್ರಮ ಆರಂಭಿಸಿದ ಮಾಹೆ ಬೆಂಗಳೂರು
ಬೆಂಗಳೂರು; 29 ಜನವರಿ 2025: ಉನ್ನತ ಶಿಕ್ಷಣ ಒದಗಿಸುವ ಪ್ರಮುಖ ಶಿಕ್ಷಣ ಸಂಸ್ಥೆ ಆಗಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬೆಂಗಳೂರು (ಮಾಹೆ) ತನ್ನ ವಿದ್ಯಾರ್ಥಿಗಳ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ನೋಡಿಕೊಳ್ಳಲು ಮನಮ್ ಎಂಬ ವಿಶಿಷ್ಟ ಕೋರ್ಸ್ ಅನ್ನು ಪ್ರಾರಂಭಿಸಿದೆ.
ಮನಮ್ ಮೂಲಕ ವಿದ್ಯಾರ್ಥಿಗಳ ಭಾವನಾತ್ಮ ಬುದ್ಧಿಮತ್ತೆಯನ್ನು ಹೆಚ್ಚಿಸುವ ಕಾರ್ಯ ನಡೆಯಲಿದ್ದು, ಆ ಮೂಲಕ ವಿದ್ಯಾರ್ಥಿಗಳು ಈ ಕಾಲದ ಉದ್ಯೋಗದ ವಾತಾವರಣಕ್ಕೆ ಸಿದ್ಧಗೊಳ್ಳುವಂತೆ ಮಾಡಲಾಗುತ್ತದೆ. ದೇಶದಲ್ಲಿಯೇ ಈ ಥರದ ಕೋರ್ಸ್ ಅನ್ನು ಮೊದಲ ಬಾರಿಗೆ ಆಯೋಜಿಸಿರುವ ಹೆಗ್ಗಳಿಕೆಗೆ ಮಾಹೆ ಪಾತ್ರವಾಗಿದೆ.
ಇದೊಂದು ಐಚ್ಛಿಕ, ನಾನ್ ಗ್ರೇಡೆಡ್ ಕೋರ್ಸ್ ಆಗಿದ್ದು, ವಿದ್ಯಾರ್ಥಿಗಳಿಗೆ ಇದರಿಂದ ಗ್ರೇಡ್ ಆಗಲಿ, ಶೈಕ್ಷಣಿಕ ಕ್ರೆಡಿಟ್ ಆಗಲಿ ದೊರೆಯುವುದಿಲ್ಲ. ಆದರೆ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಬಹುದಾಗಿದೆ. ಕೋರ್ಸು ಪೂರ್ಣಗೊಳಿಸಿದ ಬಳಿಕ ಪ್ರಮಾಣಪತ್ರ ದೊರೆಯುತ್ತದೆ. ಈ ಕೋರ್ಸಿಗೆ ಯಾವುದೇ ಶುಲ್ಕ ಇರುವುದಿಲ್ಲ. ಪ್ರತೀ ಉದ್ಯೋಗದಾತರು ಕೂಡ ಈಗೀಗ ತಮ್ಮ ಉದ್ಯೋಗಿಗಳ ಎಮೋಷನಲ್ ಇಂಟೆಲಿಜೆನ್ಸ್ ಅನ್ನು ಮೌಲ್ಯಮಾಪನ ಮಾಡುವುದರಿಂದ ಈ ಕೋರ್ಸು ಬಹಳ ಮಹತ್ವ ಪಡೆದಿದೆ.
ಈ ಕುರಿತು ಮಾತನಾಡಿರುವ ಮಾಹೆ ಬೆಂಗಳೂರಿನ ಪ್ರೊ ವೈಸ್ ಚಾನ್ಸೆಲರ್ ಪ್ರೊಫೆಸರ್ (ಡಾ.) ಮಧು ವೀರರಾಘವನ್ ಅವರು, “ವಿದ್ಯಾರ್ಥಿಗಳು ಬಹಿರಂಗವಾಗಿ ತಮ್ಮನ್ನು ತಾವು ಅಭಿವ್ಯಕ್ತಗೊಳಿಸಲು ಮತ್ತು ಅವರಿಗೆ ಬೇಕಾದ ನೆರವನ್ನು ಪಡೆದುಕೊಳ್ಳಲು ಹಿಂಜರಿಯದಂತೆ ಮಾಡುವ ಸುರಕ್ಷಿತ ಸ್ಥಳವನ್ನಾಗಿ ಮಾಹೆಯನ್ನು ರೂಪಿಸಲು ನಾವು ಬಯಸಿದ್ದೇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರಿತುಕೊಳ್ಳಲು ನಾವು ಸಮೀಕ್ಷೆಗಳನ್ನು ನಡೆಸಿದ್ದೇವೆ ಮತ್ತು ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣ ಸಂವಹನ ನಡೆಸಿದ್ದೇವೆ. ಆ ಮೂಲಕ ಮನಮ್ ಹುಟ್ಟಿಕೊಂಡಿದೆ" ಎಂದು ಹೇಳಿದರು.
ಮನಮ್ ನ ಕೋರ್ ಫೆಸಿಲಿಟೇಟರ್ ಆದ ಮಹಿಮಾ ಕಪೂರ್ ಅವರು, "ಮಾನಸಿಕ ಆರೋಗ್ಯದ ಕುರಿತ ಸಂವಹನವನ್ನು ಸುಲಭಗೊಳಿಸಲು ಮನಮ್ ಅನ್ನು ರೂಪಿಸಲಾಗಿದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಕೌನ್ಸಿಲರ್ ಗಳ ನೆರವು ಪಡೆಯಲು ಹಿಂಜರಿಯುತ್ತಾರೆ. ಆ ಅಡ್ಡಿ ಆತಂಕವನ್ನು ಮುರಿಯಲು ಈ ಕಾರ್ಯಕ್ರಮ ನೆರವಾಗಲಿದೆ" ಎಂದು ಹೇಳಿದರು.
ಮಾಹೆ ಬೆಂಗಳೂರು ಕ್ಯಾಂಪಸ್ ನ ಡೆಪ್ಯುಟಿ ರಿಜಿಸ್ಟ್ರಾರ್ ಡಾ.ರಾಘವೇಂದ್ರ ಪ್ರಭು, "ನಮ್ಮ ಕ್ಯಾಂಪಸ್ ನಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಕುರಿತ ಮಾತುಕತೆಯನ್ನು ಸಹಜವಾಗಿಸುವುದು ಮನಮ್ ನ ಮೂಲ ಉದ್ದೇಶವಾಗಿದೆ" ಎಂದು ಹೇಳಿದರು.
ಮನಮ್ ನ ಆರಂಭಿಕ ಬ್ಯಾಚ್ ಜನವರಿ 31, 2025 ರಂದು ಪ್ರಾರಂಭವಾಗಲಿದೆ. ಈ ಕೋರ್ಸ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಭೇಟಿ ಕೊಡಿ- https://manam.manipal.edu/
Comments