ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಹಂತ-4 ರ ಯೋಜನೆಯಡಿಯಲ್ಲಿ ಸ್ಥಗಿತವಾಗಿರುವ ವಿವಿಧ ಕಾಮಗಾರಿಗಳು: ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಕಚೇರಿ ಎದರು ಕಪ್ಪು ಪಟ್ಟಿ ಧರಿಸಿ ಶಾಸಕ ಪ್ರತಿಭಟನೆ
ದೊಡ್ಡಬಳ್ಳಾಪುರ ನಗರಸಭೆಯ ವ್ಯಾಪ್ತಿಯಲ್ಲಿನ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಹಂತ-4 ರ ಯೋಜನೆಯಡಿಯಲ್ಲಿ ಸ್ಥಗಿತವಾಗಿರುವ ವಿವಿಧ ಕಾಮಗಾರಿಗಳನ್ನು ಶೀರ್ಘವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಶಾಸಕ ಧೀರಜ್ ಮುನಿರಾಜ್ ನೇತೃತ್ವದಲ್ಲಿ ನಗರಸಭೆ ಸದಸ್ಯರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.
ಎಲ್ಲಾ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಜೊತೆಗೆ ಅವಧಿ ಮುಗಿದರು ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ಕ್ರಮವಹಿಸುವಂತೆ ಒತ್ತಾಯಿಸಿ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಧೀರಜ್ ಮುನಿರಾಜ್, ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ 2023ರ ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ನಡೆಸಲು ಟೆಂಡರ್ ಅನುಮೋದನೆ ಆಗಿರುತ್ತದೆ. ಅಮೃತ ನಗರೋತ್ಥಾನ ಹಂತ-4 ರ ಯೋಜನೆಯಡಿ ಸುಮಾರು 20 ಕೋಟಿ ವೆಚ್ಚದ ವಿವಿಧ ಕಾಮಗಾರಿ ನಡೆಸಲು ಒಬ್ಬ ವ್ಯಕ್ತಿಗೆ ಗುತ್ತಿಗೆ ನೀಡಲಾಗಿರುತ್ತದೆ. ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಅವಧಿ ಸಮಯ ನಿಗದಿ ಮಾಡಲಾಗಿರುತ್ತದೆ. ಆದರೆ, ಅವಧಿ ಮುಗಿದರು ಸಹಾ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ಗುತ್ತಿಗೆದಾರ ಬಳಿ ಕೇಳಿದಾಗ, ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ನೆಪ ಹೇಳಿಕೊಂಡು ಕಾಮಗಾರಿ ಸ್ಥಗಿತ ಮಾಡಲಾಗಿದೆ. ಕಳೆದ ಜುಲೈ ತಿಂಗಳಲ್ಲಿ ನಡೆದ ಜಿಲ್ಲಾ ಮಟ್ಟದ ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾ ಉಸ್ಥುವಾರಿ ಸಚಿವ ಕೆ.ಎಚ್ ಮುನಿಯಪ್ಪ ಮತ್ತು ಜಿಲ್ಲಾಧಿಕಾರಿಗೆ ಕಾಮಗಾರಿ ವಿಳಂಬದ ಬಗ್ಗೆ ಗಮನಕ್ಕೆ ತರಲಾಗಿತ್ತು. ಸಕಾಲಕ್ಕೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರಸ್ತೆ ಗುಂಡಿಯಿಂದ ಸಾರ್ವಜನಿಕರಿಗೆ ಸಮಸ್ಯೆ
ಕಾಮಗಾರಿಯ ಕೈಗೊಂಡ ಸಮಯದಲ್ಲಿ ರಸ್ತೆಗಳನ್ನೆಲ್ಲಾ ಅಗೆದು ಕೇವಲ ವೆಟ್ ಮಿಕ್ಸ್ ಮಾತ್ರ ಹಾಕಲಾಗಿತ್ತು. ಮಳೆ ಬಂದರೆ ರಸ್ತೆಗಳೆಲ್ಲ ಕೆಸರು ಗದ್ದೆಯಂತಾಗುತ್ತವೆ. ಬಿಸಿಲು ಬಂದರೆ ಧೂಳಿನಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಜತೆಗೆ ನಗರದ ಪ್ರಮುಖ ರಸ್ತೆಗಳು ಡಾಂಬರೀಕರಣದ ಕಾಮಗಾರಿಯಲ್ಲಿ ಬರುವುದರಿಂದ ಗುತ್ತಿಗೆದಾರ ಈಗಾಗಲೇ ಕಾಮಗಾರಿ ಕೆಲಸ ಪ್ರಾರಂಭಿಸಿ ಅರೆಬರೆ ಕೆಲಸ ಮಾಡಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. 1 ಕೋಟಿ 80 ಲಕ್ಷ ವೆಚ್ಚದ ಬೀದಿ ದೀಪಗಳು ಸಹಾ ಈ ಕಾಮಗಾರಿಯಲ್ಲಿ ಇದೆ. ಆದರೆ, ಗುತ್ತಿಗೆದಾರ ಯಾವುದೇ ಕೆಲಸಮಾಡಿಲ್ಲ. ಎಲ್ಲೂ ಬೀದಿದೀಪಗಳು ಅಳವಡಿಸಿಲ್ಲ. ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಸಲ್ಲಿಸಲಾಗಿದೆ.
ನಗರ ಸಭಾ ಸದಸ್ಯ ಬಂತಿ ವೆಂಕಟೇಶ್ ಮಾತನಾಡಿ, ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಗುತ್ತಿಗೆದಾರ ಕಾಮಗಾರಿಯ ಅನುದಾನದವನ್ನು ರಾಜ್ಯ ಸಕರಕಾರ ಬಿಡುಗಡೆ ಮಾಡಿಲ್ಲವೆಂದು ಉತ್ತರಿಸಿದ್ದಾರೆ. ಈ ಕುರಿತು ನಗರಸಭೆ ಆಡಳಿತಕ್ಕೆ ಹಾಗೂ ಶಾಸಕರ ಗಮನಕ್ಕೆ ತರಲಾಗಿತ್ತು. ಆದ್ದರಿಂದ ಕಾಮಗಾರಿ ಪೂರ್ಣಗೊಳಿಸವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆನಂದ್, ಸದಸ್ಯರಾದ ಟಿ.ಎನ್ ಪ್ರಭುದೇವ್, ರವಿಕುಮಾರ್, ಪದ್ಮನಾಭ, ಆರ್ ಲಕ್ಷ್ಮಿಪತಿ, ಶಿವರಾಜ್, ಭಾಸ್ಕರ್, ನಾಗರತ್ನಾ, ಹಂಸಪ್ರಿಯಾ, ವತ್ಸಲಾ ಉಪಸ್ಥಿತರಿದ್ದರು.
Comments