ಹಾಡ ಹಗಲೇ ಮನೆ ಬಾಗಿಲಿನ ಬೀಗ ಮುರಿದು ಚಿನ್ನಾಭರಣ, ನಗದು ಕಳವು.....
ದೊಡ್ಡಬಳ್ಳಾಪುರ: ಆಯುದ ಪೂಜೆ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಿಗೇಹಳ್ಳಿ ಹಾಗೂ ನಾಗಸಂದ್ರ ಗ್ರಾಮಗಳಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲೇ ಮನೆ ಬಾಗಿಲಿನ ಬೀಗ ಮುರಿದು ಚಿನ್ನಾಭರಣ, ನಗದು ದೋಚಿರುವ ಪ್ರಕರಣಗಳು ನಡೆದಿವೆ.
ನಾಗಸಂದ್ರ ಗ್ರಾಮದ ಆನಂದ್ ಹಾಗೂ ಅವರ ಪತ್ನಿ ಇಬ್ಬರು ಸಹ ನಗರದಲ್ಲಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆ ಬಾಗಿಲಿನ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಉಂಗುರ, ಓಲೆ,ಕೊರಳಿನ ಸರ ಸೇರಿದಂತೆ ಸುಮಾರು ₹1 ಲಕ್ಷ ಮೌಲ್ಯದ ಚಿನ್ನಾಭರಣ, ಸುಮಾರು ₹25 ಸಾವಿರ ಬೆಲೆ ಬಾಳುವ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಲಾಗಿದೆ. ಚಿನ್ನಾಭರಣದ ವಸ್ತುಗಳು ಇಟ್ಟಿದ್ದ ಪರ್ಸ್ಗಳನ್ನು ಖಾಲಿ ಮಾಡಿ ಕಳವು ಮಾಡಿರುವ ಮನೆಯಿಂದ ಸ್ವಲ್ಪ ದೂರದಲ್ಲಿಯೇ ಬಿಸಾಡಿ ಹೋಗಿದ್ದಾರೆ. ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಕಳವು ನಡೆದಿರುವುದು ಗಮನಕ್ಕೆ ಬಂದಿದೆ.
ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಪಂಕಜ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments