ರೈತರು ಯೋಚಿಸಿ ಯೋಗ್ಯ ಪಕ್ಷಕ್ಕೆ ಮತ ನೀಡಿ-ವಿ.ಆರ್.ನಾರಾಯಣ್ ರೆಡ್ಡಿ
ಕೊಪ್ಪಳ ಜಿಲ್ಲೆ:ಕುಕನೂರ: ಲೋಕಸಭಾ ಚುನಾವಣೆಯಲ್ಲಿ ರೈತರ ಹಿತ ಕಾಯುವ ರೈತರ ಏಳಿಗೆ ಬಯಸುವ ಪಕ್ಷಕ್ಕೆ ತಮ್ಮ ಮತವನ್ನು ನೀಡಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ವಿ.ಆರ್ .ನಾರಾಯಣ್ ರೆಡ್ಡಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಆದರೆ, ರೈತರಿಗೆ ದೊರಕಬೇಕಾದ ನ್ಯಾಯ ಇಂದಿಗೂ ದೊರಕಿಲ್ಲ. ಕೇಂದ್ರ ಸರ್ಕಾರದಲ್ಲಿ 10 ವರ್ಷ ಆಡಳಿತ ನಡೆಸಿದ ಮೋದಿ ಸರ್ಕಾರ ರೈತ ವಿರೋಧಿಯಾಗಿದೆ. ರೈತರು ಬೆಳೆದ ಬೆಳೆಗಳಿಗೆ ಜಿಎಸ್‌ಟಿಯನ್ನು ಹಾಕಿದ್ದಾರೆ.
ತಿನ್ನುವ ಅನ್ನಕ್ಕೂ, ಕುಡಿಯುವ ನೀರಿಗೂ ಇಂದು ರೈತರು ಜಿಎಸ್‌ಟಿ ಕಟ್ಟಬೇಕಾಗಿದೆ. ರೈತರ ಸಾಲ ಮನ್ನಾ ಮಾಡಿದರೆ ಆರ್ಥಿಕ ಹೊರೆಯಾಗುತ್ತದೆ ದೇಶ ಆರ್ಥಿಕ ಸಂಕಷ್ಟಕ್ಕೀಡಾಗುತ್ತದೆ ಎಂದು ಹೇಳುವ ಜನಪ್ರತಿನಿಧಿಗಳು. ಒಂದು ವೇಳೆ ರೈತರು
ಉಳುಮೆ ಮಾಡುವುದನ್ನು ಬಿಟ್ಟರೆ ಈ ದೇಶಕ್ಕೆ ಏನಾಗುತ್ತದೆ ಎಂಬುದನ್ನು ವಿಚಾರ ಮಾಡಬೇಕು. ಸಿದ್ದರಾಮಯ್ಯ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರಾಜ್ಯ ಸರ್ಕಾರದ 4000 ರೂಪಾಯಿ ಪಾಲನ್ನು ಕಡಿತಗೊಳಿಸಿರುವುದು ಖಂಡನೀಯ, ಯಾರೇ ಅಧಿಕಾರಕ್ಕೆ ಬಂದರು ರೈತರ ಹಿತವನ್ನು ಕಾಯಬೇಕು, ಸ್ವಾಮಿನಾಥನ್ ವರದಿಯನ್ನು ಅನುಷ್ಠಾನ ಮಾಡಿ ರೈತರಿಗೆ ಬೆಳೆ ಪರಿಹಾರ ನಷ್ಟವನ್ನು ಶೀಘ್ರದಲ್ಲಿ ಒದಗಿಸಿ ಕೊಡಬೇಕು ಎಂದರು.
ರಾಜ್ಯ ರೈತ ಸಂಘ ಹಸಿರು ಸೇನೆ ಯಾವ ಪಕ್ಷದ ಪರವಾಗಿಯೂ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ರೈತರು ವಿಚಾರ ಮಾಡಿ ರೈತರ ಏಳಿಗೆ ಬಯಸುವ ಪಕ್ಷಕ್ಕೆ ತಮ್ಮ ಮತವನ್ನು ನೀಡಬೇಕು ಎಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೋವಿಂದ ರೆಡ್ಡಿ, ಅಂದಪ್ಪ ಹುರುಳಿ, ಕಳಕಪ್ಪ ಕ್ಯಾದಗುಂಪಿ, ಲಕ್ಷ್ಮಣ್ ಕೋರಿ, ಹನುಮೇಶ, ಮಂಜುನಾಥ್ ಚಟ್ಟಿ, ಬಸಪ್ಪ ಮಂಡಲಗೇರಿ, ರವಿ ಸೆಲೂಡಿ, ಗವಿಸಿದ್ದಪ್ಪ ಜೀನಿನ್, ಗಂಗಮ್ಮ, ಸಾವಿತ್ರಮ್ಮ, ಶರಣಕುಮಾರ್ ಇತರರು ಇದ್ದರು.
Comments