ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ......

ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ......

ದೊಡ್ಡಬಳ್ಳಾಪುರ: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಯುವತಿಯ ಜತೆ ಕಳೆದ ಒಂದು ವರ್ಷದಿಂದ ಪ್ರೇಮ ಸಂಬಂಧವನ್ನು ಹೊಂದಿದ್ದ ಯುವಕ, ನಾವಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ ಎಂದೇ ಭಾವಿಸಿ, ಮದುವೆಯಾಗುವ ಆಸೆಯನ್ನು ಸಹ ಕಂಡಿದ್ದ! ಆದರೆ, ಆತನ ಕನಸು ಈಕೆಯ ಮೋಸದಾಟ ಬಯಲಾಗ್ತಿದ್ದಂತೆ ನುಚ್ಚುನೂರಾಗಿದ್ದು, ಇದೀಗ ಸಾವಿನ ಮನೆ ಸೇರುವಂತೆ ಮಾಡಿದೆ.



ಮೃತ ಯುವಕನನ್ನು ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ನಿವಾಸಿ ಬಾಲಾಜಿ (23) ಎಂದು ಗುರುತಿಸಲಾಗಿದ್ದು, ಒಂದು ವರ್ಷದ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಯುವತಿಯೊಂದಿಗೆ ಪರಿಚಯ ಹೊಂದಿದ್ದ. ಬಳಿಕ ಅದು ಪ್ರೀತಿಗೆ ತಿರುಗಿದ್ದು, ಜತೆಯಲ್ಲಿ ಸುತ್ತಾಡಿ ಕೊನೆಯಲ್ಲಿ ಬೇರೊಬ್ಬನ ಜತೆಗೆ ಪ್ರೀತಿ ಸಂಬಂಧದಲ್ಲಿ ಇರುವುದು ಗೊತ್ತಾಗಿದೆ. ತನ್ನೊಂದಿಗೆ ಲವ್ ಮಾಡಿ, ಕೈಕೊಟ್ಟ ಬೇಸರದಲ್ಲಿ ಮನನೊಂದ ಬಾಲಾಜಿ, ಕಾಳುಮಾತ್ರೆ ಸೇವಿಸಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.



ನಂಬಿಸಿ, ಮೋಸ ಮಾಡಿದ ಯುವತಿಯನ್ನು ಕನಕಪುರ ಮೂಲದವಳು ಎಂದು ಹೇಳಲಾಗಿದ್ದು, ಸೋಮವಾರ (ಮೇ.13) ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ ಒಂದು ವರ್ಷವಾಗಿತ್ತು. ಇದೇ ಕಾರಣವನ್ನು ಮುಂದಿಟ್ಟ ಬಾಲಾಜಿ, ಮದುವೆ ಮಾಡಿಕೊಳ್ಳೋಣ ಅಂದಿದಕ್ಕೆ ಮನೆಯಲ್ಲಿ ಒಪ್ಪಲ್ಲ ಎಂದು ಹೇಳಿದ್ದಲ್ಲದೇ, ಬೇರೆ ಯುವಕನ ಜತೆ ಪ್ರೀತಿಯಲ್ಲಿರುವುದಾಗಿ ಹೇಳಿದ್ದಾಳೆ. ಈ ವಿಷಯಕ್ಕೆ ತೀವ್ರ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.



ವೃತ್ತಿಯಲ್ಲಿ ಅಮೆಜಾನ್ ಡೆಲಿವರಿ ಬಾಯ್ ಆಗಿದ್ದ ಬಾಲಾಜಿ, ಬಡ ಕುಟುಂಬಕ್ಕೆ ಆಧಾರವಾಗಿದ್ದ. ಇದೀಗ ಮಗನ ದುರಂತ ಅಂತ್ಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬೆನ್ನಲ್ಲೇ ಯುವತಿ ವಿರುದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಯುವಕನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

Comments