ಬಂಧನಕ್ಕೆ ತೆರಳಿದ ವೇಳೆ ಪೊಲೀಸರ ಮೇಲೆ ಆರೋಪಿ ಹಲ್ಲೆ ಯತ್ನ|ಹೇಮಂತ್ ಗೌಡ ಕೊಲೆ ಪ್ರಕರಣದ A2 ಆರೋಪಿ ಕಾಲಿಗೆ ಗುಂಡೇಟು.
ದೊಡ್ಡಬಳ್ಳಾಪುರ: ಹಣಕಾಸು ವಿಚಾರವಾಗಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯಾದ ಮೇಡಹಳ್ಳಿ ನಿವಾಸಿ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆಯನ್ನು ಗ್ರಾಮಾಂತರ ಪೊಲೀಸರು ಈಗಾಗಲೇ ಬಂದಿಸಿದು ಆತನ ತಮ್ಮ ಶ್ರೀನಿವಾಸ್ ಅಲಿಯಾಸ್ ಚಿಕ್ಕ ಮಿಟ್ಟೆಯ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ.
ಮೇ 11 ರಂದು ಬಾಶೆಟ್ಟಿಹಳ್ಳಿ ಸಮೀಪದ ನವೋದಯ ಶಾಲೆಯ ಬಳಿ ಹುಸ್ಕೂರು ನಿವಾಸಿ ಹೇಮಂತಗೌಡ(29) ಎಂಬುವರನ್ನು ಆರೋಪಿ ನರಸಿಂಹಮೂರ್ತಿ ಹಾಗೂ ಆತನ ಸಹಚರರು ಲಾಂಗ್ ಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದರು. ಶುಕ್ರವಾರ ಬೆಳ್ಳಗಿನ ಜಾವದ ಸುಮಾರಿಗೆ ಆರೋಪಿಯ ತಮ್ಮ ಶ್ರೀನಿವಾಸ್ (ಅಲಿಯಾಸ್ ಚಿಕ್ಕ ಮಿಟ್ಟೆ) ರಾಜಾನುಕುಂಟೆ ಹೊರವಲಯದ ಶ್ರೀರಾಮನಹಳ್ಳಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಬಂಧಿಸಲು ತೆರಳಿದಾಗ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದರು ಎನ್ನಲಾಗಿದೆ.
ಈ ವೇಳೆ ಪ್ರಾಣರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರೆ, ಇದೀಗ ಮತ್ತೊಬ್ಬ ಆರೋಪಿಯನ್ನು ಬಂದಿಸಿದ್ದಾರೆ.
Comments