ನಗರಕ್ಕೆ ನೀರು ಹರಿಸುವ ಜಲಮಂಡಳಿ ಯೋಜನೆಗೆ ಸ್ಥಳೀಯರು, ರೈತ ಸಂಘಟನೆಗಳ ಆಕ್ಷೇಪ; ಹೆಸರಘಟ್ಟ ಕೆರೆ ನೀರು ಬಳಕೆಗೆ ವಿರೋಧ.....!!
ನಗರಕ್ಕೆ ನೀರು ಹರಿಸುವ ಜಲಮಂಡಳಿ ಯೋಜನೆಗೆ ಸ್ಥಳೀಯರು, ರೈತ ಸಂಘಟನೆಗಳ ಆಕ್ಷೇಪ; ಹೆಸರಘಟ್ಟ ಕೆರೆ ನೀರು ಬಳಕೆಗೆ ವಿರೋಧ.....!!
ಯಲಹಂಕ: ಹೆಸರಘಟ್ಟ ಕೆರೆಯ ನೀರನ್ನು ಬೆಂಗಳೂರು ನಗರಕ್ಕೆ ಹರಿಸುವ ಜಲಮಂಡಳಿ ಯೋಜನೆಗೆ ಸ್ಥಳೀಯ ರೈತರು ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
"ಮಳೆ ಬಂದು ಕೆರೆಗೆ ಸಾಕಷ್ಟು ನೀರು ಹರಿದು ಬಂದ ಮೇಲೆ ನೀರು ಹರಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಈಗಿರುವ ಕೆರೆ ನೀರನ್ನು ಹರಿಸಲು ಮುಂದಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,'' ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ, ರಾಷ್ಟ್ರೀಯ ಕಿಸಾನ್ ಸಂಘ ಮತ್ತು ವಿವಿಧ ಸಂಘಟನೆಗಳು ಎಚ್ಚರಿಸಿವೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಕಡತನಮಲೆ ನಂಜುಂಡಪ್ಪ ಇತರ ರೈತ ಸಂಘಟನೆ ಪ್ರತಿನಿಧಿಗಳೊಂದಿಗೆ ಶುಕ್ರವಾರ ಕೆರೆ ಅಂಗಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗ ಳೊಂದಿಗೆ ಮಾತನಾಡಿದರು. "ಹೆಸರಘಟ್ಟ ಕೆರೆಯಲ್ಲಿ ಕೇವಲ ಏಳೆಂಟು ಅಡಿ ಮಾತ್ರ ನೀರಿದೆ. ಈ ನೀರನ್ನು ಹೆಸರಘಟ್ಟ ಕೆರೆಯಿಂದ ಸೋಲದೇವನಹಳ್ಳಿ ಪಂಪ್ ಸ್ಟೇಷನ್ ಮೂಲಕ ಬೆಂಗಳೂರು ನಗರಕ್ಕೆ ಹರಿಸಿದರೆ.
ಇಲ್ಲಿನ ನೀರು ಒಂದು ವಾರಕ್ಕೂ ಸಾಕಾಗುವುದಿಲ್ಲ. ಕಳೆದ 30 ವರ್ಷಗಳಿಂದಲೂ ಹೂಳು ತೆಗೆಯದೆ 55ಅಡಿಗಿಂತಲೂ ಹೆಚ್ಚು ಹೂಳು ತುಂಬಿದೆ. ಎರಡು ವರ್ಷದಿಂದ ಸರಿಯಾಗಿ ಮಳೆಯಾಗದೆ ಕೇವಲ ಈಗ ಏಳೆಂಟು ಅಡಿ ಮಾತ್ರ ನೀರಿದೆ. ಸದ್ಯ ಕೆರೆಯಲ್ಲಿ ಇರುವುದು ಡೆಡ್ ಸ್ಟೋರೇಜ್ ಮಾತ್ರ,” ಎಂದರು.
"ಏಳೆಂಟು ಅಡಿ ನೀರನ್ನು ರಕ್ಷಿಸಿಕೊಳ್ಳಲು ನೀರಿನ ಹಕ್ಕಿಗಾಗಿ ಅಭಿಯಾನ ಹಮ್ಮಿಕೊಂಡಿದ್ದೇವೆ,'' ಎಂದು ರಾಷ್ಟ್ರೀಯ ಕಿಸಾನ್ ಸಂಘಟನೆಯ ರಾಜ್ಯಾಧ್ಯಕ್ಷ ವಿಜಯಕುಮಾರ್ ಹೇಳಿದರು. ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರಾಜಾನುಕುಂಟೆ ಆರ್. ಲೋಕೇಶ್ ಶರ್ಮ ಇದ್ದರು.
Comments