|ನರೇಗಾ ಕೂಲಿ ಹಣ ಮಂಜೂರು ಮಾಡಲು ಲಂಚ ಸ್ವೀಕಾರ | ರೇಷ್ಮೆ ಅಧಿಕಾರಿಗೆ ಕಠಿಣ ಕಾರಾಗೃಹ ಶಿಕ್ಷೆ |
ತುಮಕೂರು : ನರೇಗಾ ಯೋಜನೆ ಅಡಿಯಲ್ಲಿ ಹನಿ ನೀರಾವರಿ ಅಳವಡಿಕೆಯ ಕೂಲಿ ಮಂಜೂರು ಮಾಡಲು ಹಾಗೂ ಸಬ್ಸಿ ಡಿ ಹಣ ಮಂಜೂರಿಗಾಗಿ ಲಂಚ ಸ್ವೀಕರಿಸಿದ್ದ ಮಧುಗಿರಿಯ ರೇಷ್ಮೆ ಇಲಾಖೆ ಅಧಿಕಾರಿಯೊಬ್ಬರಿಗೆ ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಲಯವು ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 96 ಸಾವಿರ ರೂಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಮಧುಗಿರಿ ತಾಲ್ಲೂಕು ಶ್ರೀರಂಗಯ್ಯ ಎಂಬುವರು ಹೊಸಕೆರೆಯ ಸರ್ವೆ ನಂ. 155 / 01 ರಲ್ಲಿ ನರೇಗಾ ಯೋಜನೆಯಡಿಯಲ್ಲಿ ರೇಷ್ಮೆ ನಾಟಿ ಮತ್ತು ಹನಿ ನೀರಾವರಿ ಅಳವಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೂಲಿ ಹಣ ಮಂಜೂರು ಮಾಡಲು ರೇಷ್ಮೆ ಇಲಾಖೆಯ ರೇಷೆ ಪ್ರದರ್ಶಕರಾದ ಎಂ.ವಿ. ರಾಮಕೃಷ್ಣಯ್ಯ ಲಂಚಕ್ಕೆ ಒತ್ತಾಯಿಸಿ ಮುಂಗಡವಾಗಿ 15 ಸಾವಿರ ರೂಗಳ ಹಣ ಪಡೆದುಕೊಂಡಿದ್ದರು.
ನಂತರ ರೇಷ್ಮೆ ನಾಟಿ ಸಬ್ಸಿ ಡಿ ಮೊತ್ತ 70 ಸಾವಿರ ರೂಗಳನ್ನು ಮಂಜೂರು ಮಾಡಲು 20 ಸಾವಿರ ರೂ ಲಂಚಕ್ಕೆ ಒತ್ತಾಯಿಸಿದ್ದರು. ಇದಲ್ಲದೆ ನರೇಗಾ ಯೋಜನೆಯಡಿಯಲ್ಲಿ ಸಾಮಾಗ್ರಿ ಮೊತ್ತ 33 ಸಾವಿರ ರೂ ಮಂಜೂರು ಮಾಡಿಸಿಕೊಡುತ್ತೇನೆ. ಅದಕ್ಕೆ 13 ಸಾವಿರ ರೂ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದರು.
2019ರ ಮಾರ್ಚ್ 15 ರಂದು ಶ್ರೀರಂಗಯ್ಯ ಅವರ ಮಗ ರಂಗನಾಥ್ ಸಬ್ಸಿಡಿ ಹಣದ ಬಗ್ಗೆ ವಿಚಾರಿಸಲಾಗಿ ಈಗಾಗಲೆ ನಿಮ್ಮ ಖಾತೆಗೆ ಜಮೆ ಮಾಡಲಾಗಿದೆ. ಸಬ್ಸಿಡಿ ವಿಚಾರವಾಗಿ 20 ಕೊಡಬೇಕು ಎಂದಿದ್ದರು. ಸಾಮಗ್ರಿ ಸೇರಿ ಒಟ್ಟು 33 ತಂದು ಕೊಡು ಎಂದು ಒತ್ತಾಯ ಮಾಡಿದ್ದರು.
ಇಷ್ಟೊಂದು ಮೊತ್ತದ ಲಂಚ ನೀಡಲು ಮನಸ್ಸಾ ಗದ ಶ್ರೀರಂಗಯ್ಯ ಹಾಗೂ ಅವರ ಮಗ ಭ್ರಷ್ಟಚಾರ ನಿಗ್ರಹ ದಳವನ್ನು ಸಂಪರ್ಕಿಸಿದ್ದರು. 2019 ರ ಮಾರ್ಚ್ 18 ರಂದು ಆರೋಪಿ ರಾಮಕೃಷ್ಣಯ್ಯ 33 ಸಾವಿರ ರೂಗಳ ಲಂಚದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಪೋಲೀಸರು ದಾಳಿಮಾಡಿ ಮುಂದಿನ ಕ್ರಮ ಕೈಗೊಂಡಿದ್ದರು. ಡಿಎಸ್ ಪಿ ರಘುಕುಮಾರ್ ನೇತೃತ್ವದಲ್ಲಿ ಇನ್ಸೆಕ್ಟರ್ ಹಾಲಪ್ಪ, ಪ್ರವೀಣ್ ಕುಮಾರ್, ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಕಲಂ 7 ರ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು .
ಪ್ರಕರಣದ ವಿಚಾರಣೆಯು ತುಮಕೂರು 7 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಲಯದಲ್ಲಿ ನಡೆದು ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ರಾಮಕೃಷ್ಣಯ್ಯರಿಗೆ ಮೇಲ್ಕಂಡಂತೆ ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾದ ಎನ್. ಬಸವರಾಜು ವಾದಿಸಿದ್ದರು.
Comments