ಅಕಾಲಿಕ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಬಾರಿ ಬಿರುಗಾಳಿ ಮಳೆಗೆ ಬೆಳೆಗಳು ನೆಲಕಚ್ಚಿವೆ.....!!

ಅಕಾಲಿಕ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಬಾರಿ ಬಿರುಗಾಳಿ  ಮಳೆಗೆ ಬೆಳೆಗಳು ನೆಲಕಚ್ಚಿವೆ.....

ದೊಡ್ಡಬಳ್ಳಾಪುರ: ಶನಿವಾರ ರಾತ್ರಿ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹಾದ್ರಿಪುರ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಸುರಿದ ಬಾರಿ ಬಿರುಗಾಳಿ  ಮಳೆಗೆ ಬೆಳೆಗಳು ನೆಲಕಚ್ಚಿವೆ. 


ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ನುಗ್ಗೆ ಮರಗಳು ನೆಲಕ್ಕುರುಳಿ ಬಿದ್ದಿದೆ ; ಬಿರುಗಾಳಿ ಮಳೆಯಿಂದ ರೈತರ ಕನಸು ನುಚ್ಚುನೂರು.....!!


 

 ಹಾದ್ರಿಪುರ ಗ್ರಾಮದ ಸುಧಾಕರ್, ನಂಜೇಗೌಡ, ಮಂಜುನಾಥ, ಜಯರಾಮಯ್ಯ, ದೇವರಾಜಪ್ಪ, ಎಂಬ ರೈತರಿಗೆ ಸೇರಿದ ಬಾಳೆ ಗಿಡಗಳು, ಚೆನ್ನರಾಯಪ್ಪ ಅವರು 1 ಎಕರೆಯಲ್ಲಿ ಬೆಳೆದಿದ್ದ ಹೀರೆಗಿಡದ ಚಪ್ಪರ ನೆಲಕ್ಕುರುಳಿದೆ.     ಅಲ್ಲದೇ ಗ್ರಾಮದ ಸುತ್ತಮುತ್ತ ಅಡಿಕೆ ಮರಗಳು ಕೂಡ ನೆಲಕ್ಕೆ ಉರುಳಿವೆ‌. ಬಾಳೆ‌ ಹಾಗೂ ಹೀರೆಗಿಡ ಬೆಳೆ ಕಟಾವಿಗೆ ಬಂದಿತ್ತು. ಬಾಳೆ ಹಾಗೂ ಅಡಿಕೆ ಇನ್ನೊಂದು ತಿಂಗಳಲ್ಲಿ ಕಟಾವು ಮಾಡಬೇಕಿತ್ತು. ಆದರೆ, ಅಕಾಲಿಕ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ರೈತರ ಪರಿಸ್ಥಿತಿ. 


  ಸುಮಾರು ಎಂಟು‌ ಎಕರೆ ಪ್ರದೇಶದಲ್ಲಿ ಬೆಳೆಗಳು ನಾಶವಾಗಿವೆ. ಐದು ಲಕ್ಷ ಖರ್ಚು ಮಾಡಿ ಬಾಳೆ, ಹೀರೆಕಾಯಿ ಬೆಳೆ ಬೆಳೆಯಲಾಗಿತ್ತು. ಈಗ ಬೆಳೆ ನಾಶವಾದ ಹಿನ್ನೆಲೆಯಲ್ಲಿ 15 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ‌ ಎಂದು ರೈತರು ಅಳಲು ತೋಡಿಕೊಂಡಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.


ಮುಂದಿನ 24 ಗಂಟೆಯಲ್ಲಿ ಮಳೆ ಮುನ್ಸೂಚನೆ

ಏ.22ರಂದು ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಗದಗನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ ಸೇರಿ ದಕ್ಷಿಣಒಳನಾಡಿನ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಇನ್ನು ರಾಜಧಾನಿ ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 36 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.


ತಾಪಮಾನದ ಮುನ್ಸೂಚನೆ

ಏಪ್ರಿಲ್ 22 ರಿಂದ 25ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯಾದ್ಯಂತ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.


ಬಿರುಗಾಳಿ ಸಹಿತ ಮಳೆ ಸಾಧ್ಯತೆ

ಏಪ್ರಿಲ್‌ 22ರಂದು ಒಂದು ಅಥವಾ ಎರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದ್ದು, ಮುಂದಿನ 5 ದಿನಗಳಲ್ಲಿ ಗರಿಷ್ಟ ಉಷ್ಣಾಂಶದಲ್ಲಿ ಕ್ರಮೇಣ 2-3 ಡಿ.ಸೆ ಏರಿಕೆಯಾಗುವ ಸಾಧ್ಯತೆಯಿದೆ.

Comments