*ಚುನಾವಣೆ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ: ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ*

 ಚುನಾವಣೆ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ: ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ



ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 02(ಕರ್ನಾಟಕ ವಾರ್ತೆ): ಲೋಕಸಭಾ ಚುನಾವಣೆ ಪ್ರಯುಕ್ತ ನೇಮಕಾತಿಯಾಗಿರುವ ಎಲ್ಲಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಚುನಾವಣಾ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ ಚುನಾವಣಾ ಕಾರ್ಯ ಯಶಸ್ವಿಯಾಗಲು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಎಮ್‌.ಸಿ.ಸಿ ಅಧ್ಯಕ್ಷರಾದ  ಡಾ.ಕೆ.ಎನ್. ಅನುರಾಧ ತಿಳಿಸಿದರು.


 ದೊಡ್ಡಬಳ್ಳಾಪುರ ತಾಲೂಕಿನ ಎಸ್ .ಎಸ್. ಟಿ, ಎಫ್ ಎಸ್ ಟಿ, ವಿ ಎಸ್ ಟಿ ಹಾಗೂ ಸೆಕ್ಟರ್ ಅಧಿಕಾರಿಗಳೊಂದಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ  ಅವರು ತಂಡದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದರು. ಚುನಾವಣೆಗೆ ಸಂಬಂಧಿಸಿದಂತೆ ದಾಖಲಾಗುವ ದೂರುಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥ ಪಡಿಸಬೇಕು. ಜನರು ಸ್ವಯಂ ಪ್ರೇರಿತವಾಗಿ ಬಂದು ಮತ ಚಲಾಯಿಸಲು  ಎಲ್ಲಾ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಬೇಕು. ತಾಪಮಾನ ಹೆಚ್ಚಾಗಿರುವುದರಿಂದ ಮತಗಟ್ಟೆಗಳಲ್ಲಿ ಮತದಾರರಿಗೆ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

 

ಸಹಾಯಕ ಚುನಾವಣಾ ಅಧಿಕಾರಿಗಳಾದ ಶ್ರೀನಿವಾಸ್ ಮಾತನಾಡಿ ತಾಲೂಕಿನಲ್ಲಿ ಚುನಾವಣೆಗೆ  ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಶತ ಮತದಾನದ ಗುರಿ ಹೊಂದಲಾಗಿದೆ  ಎಂದು ತಿಳಿಸಿದರು.


ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮುನಿರಾಜುರವರು ಸ್ವೀಪ್ ಅಡಿಯಲ್ಲಿ ಯುವಕರು, ಮಹಿಳೆಯರು ಹಾಗೂ ಕಾರ್ಮಿಕರು ತಪ್ಪದೇ ಮತ ಚಲಾಯಿಸುವಂತೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರೂ ಮತ ಚಲಾಯಿಸುವಂತೆ ಪ್ರೇರೇಪಣೆ ನೀಡಲಾಗುವುದು ಎಂದು ತಿಳಿಸಿದರು. 


ಸಭೆಯಲ್ಲಿ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ,ಪೌರಾಯುಕ್ತರಾದ ಪರಮೇಶ್,ಸಹಾಯಕ ನಿರ್ದೇಶಕರಾದ ಕುಮಾರ್ ಸೇರಿದಂತೆ ಅಧಿಕಾರಿಗಳು ಇದ್ದರು..

Comments