ಪಿಎಸ್ಐ ಜಗದೀಶ್ ಹತ್ಯೆ ಪ್ರಕರಣ | 8 ವರ್ಷ 6 ತಿಂಗಳ ನಂತರ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಜಿಲ್ಲಾ ನ್ಯಾಯಾಲಯ...!!
ಪಿಎಸ್ಐ ಜಗದೀಶ್ ಹತ್ಯೆ ಪ್ರಕರಣ | 8 ವರ್ಷ 6ತಿಂಗಳ ನಂತರ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಜಿಲ್ಲಾ ನ್ಯಾಯಾಲಯ...
ದೊಡ್ಡಬಳ್ಳಾಪುರ: ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದ ಜಗದೀಶ್ ಹತ್ಯೆ ಆರೋಪಿಗಳಿಗೆ ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶರಾದ ರಘುನಾಥ್ ಅವರು ತೀರ್ಪು ನೀಡಿದ್ದಾರೆ.
ಐದು ಜನ ಆರೋಪಿಗಳ ಪೈಕಿ ಮೊದಲ ಆರೋಪಿ ಮಧು ಎಂಬಾತನಿಗೆ 7 ವರ್ಷ ಸಜೆ ಹಾಗೂ ₹1 ಲಕ್ಷ ದಂಡ, ಎರಡನೇ ಆರೋಪಿ ಹರೀಶ್ ಬಾಬು ಎಂಬಾತನಿಗೆ ಜೀವಾವಧಿ ಸಜೆ ಹಾಗೂ ₹3 ಲಕ್ಷ ದಂಡ ವಿಧಿಸಲಾಗಿದೆ. ಉಳಿದ ಮೂರು ಜನ ಆರೋಪಿಗಳಾದ ರಘು, ತಿಮ್ಮಕ್ಕ, ಯಲಾಲ ಹನುಮಂತರಾವ್ ಖುಲಾಸೆಗೊಂಡಿದ್ದಾರೆ.
ಹತ್ಯೆಗೀಡಾದ ಸಬ್ಇನ್ಸ್ಪಕ್ಟರ್ ಜಗದೀಶ್ ಅವರು ನಗರ ಠಾಣೆಯ ಸಿಬ್ಬಂದಿ ವೆಂಕಟೇಶ್ ಕುಮಾರ್, ಚಂದ್ರು, ಶಶಧರ್ ಅವರೊಂದಿಗೆ 2015 ಅಕ್ಟೋಬರ್ 16 ರಂದು ಖಚಿತ ಮಾಹಿತಿ ಮೇರೆಗೆ ಬೈಕ್ ಸೇರಿದಂತೆ ಇತರೆ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಬಂಧಿಸಲು ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ಕಲ್ಯಾಣ ಪಂಟಪದ ಬಳಿ ಇರುವ ಟರ್ಬೋ ಹೊಂಡಾ ಶೋರೂಮ್ ಹತ್ತಿರ ಹೋಗಿದ್ದರು.
ಆರೋಪಿಗಳಾದ ಮಧು ಮತ್ತು ಕೃಷ್ಣಪ್ಪ ಅವರನ್ನು ಹಿಡಿದುಕೊಳ್ಳಲು ಜಗದೀಶ್ ಅವರು ಹಿಂಬಾಲಿಸಿದಾಗ ಇದ್ದಕ್ಕಿದ್ದಂತೆ ಇಬ್ಬರು ಹಿಂತಿರುಗಿ ಮಧು ಎಂಬಾತ ರಸ್ತೆ ಪಕ್ಕದ ಚರಂಡಿಗೆ ಪಿಎಸ್ಐ ಅವರನ್ನು ಕೆಡವಿ ಪಿಸ್ತೂಲ್ ಕಸಿದುಕೊಂಡು ಅವರ ತಂದೆ ಕೃಷ್ಣಪ್ಪನ ಬಳಿ ಇದ್ದ ಚಾಕುವಿನಿಂದ ಜಗದೀಶ್ ಅವರ ಎಡಭಾಗದ ಪಕ್ಕೆಗೆ ಐದಾರು ಬಾರಿ ಇರಿದ್ದಿದ್ದ ಇದರಿಂದ ಮೃತಪಟ್ಟಿದ್ದರು.
ಪಿಎಸ್ಐ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದ ಕಾನ್ಸ್ಟೇಬಲ್ ವೆಂಕಟೇಶ್ ಕುಮಾರ್ ಎಂಬುವವರಿಗು ಸಹ ಚಾಕುವಿನಿಂದ ಇರಿದು ಪಿಎಸ್ಐ ಅವರ ಸರ್ವಿಸ್ ಪಿಸ್ತೂಲ್ ನೊಂದಿಗೆ ಪರಾರಿಯಾಗಿದ್ದರು.
ಕೊಲೆಯ ನಂತರ ರೈಲಿನಲ್ಲಿ ಪರಾರಿಯಾಗಿದ್ದ ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಬಾನೂತ್ ಅವರು ಬಂಧಿಸಿದ್ದರು.
ಈ ಕುರಿತಂತೆ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ರಾಜೇಂದ್ರಕುಮಾರ್ ಅವರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿದ್ದರು. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಮೀನಾಕುಮಾರಿ,ಎಸ್.ವಿ.ಭಟ್ ವಾದಿಸಿದ್ದರು.
ಹತ್ಯೆಗೀಡಾಗಿರುವ ಪಿಎಸ್ಐ ಜಗದೀಶ್ ಅವರ ಪತ್ನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಲಾಗಿದೆ, ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು:
ಆರೋಪಿಗಳನ್ನು ಬಂಧಿಸುವ ಸಮಯದಲ್ಲಿ ಸಾರ್ವಜನಿಕವಾಗಿ ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಈಗ ನ್ಯಾಯಾಲಯ ನೀಡಿರುವ ತೀರ್ಪು ಅಸಮಧಾನ ತರಿಸಿದೆ. ಈ ತೀರ್ಪಿನನ್ನು ಪ್ರಶ್ನಿಸಿ, ದಿ. ಪಿಎಸ್ಐ ಜಗದೀಶ್ ಅವರ ಕುಟುಂಬದ ಜೊತೆ ಚರ್ಚಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದು ಹುತಾತ್ಮ ಪಿಎಸ್ಐ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ರಾಜಘಟ್ಟರವಿ ತಿಳಿಸಿದ್ದಾರೆ.
Comments