ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂಬ ಗೊಂದಲಗಳ ನಡುವೆ ಸದಾನಂದಗೌಡರಿಗೆ ಬಿಜೆಪಿ ಟಿಕೆಟ್ ಆಪರ್....
ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂಬ ಗೊಂದಲಗಳ ನಡುವೆ ಸದಾನಂದಗೌಡರಿಗೆ ಬಿಜೆಪಿ ಟಿಕೆಟ್ ಆಪರ್.....
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಮಂಗಳೂರು ಉಡುಪಿ ಸಂಸದೆ ಶೋಭ ಕರಂದ್ಲಾಜೆಗೆ ನೀಡಿ ಸದಾನಂದಗೌಡರಿಗೆ ಟಿಕೆಟ್ ಕೈ ತಪ್ಪಿದ ಕಾರಣದಿಂದ ಅಸಮಾಧಾನಗೊಂಡಿರುವ ಡಿವಿ ಸದಾನಂದಗೌಡ ಅವರು ನಾಳೆ ಬಿಜೆಪಿಯಲ್ಲಿಯೇ ಕಟ್ಟಿಹಾಕುವ ಸಾಧ್ಯತೆ ಇದೆ. ಈ ನಡುವೆ ಸದಾನಂದಗೌಡರನ್ನು ಸಂಪರ್ಕಿಸಿದ ಬಿಜೆಪಿ ಹೈಕಮಾಂಡ್ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಫರ್ ಕೊಟ್ಟು ಮುನಿಸು ಶಮನಗೊಳಿಸುವ ಪ್ರಯತ್ನ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮುನಿಸಿಕೊಂಡಿರುವ ಸದಾನಂದಗೌಡ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ವರ್ಧೆಗೆ ಬಿಜೆಪಿ ಆಪರ್ ಕೊಟ್ಟರು ಸಹಮತ ಸೂಚಿಸಿಲ್ಲ. ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಗೆ ತೆರಳುವ ಮುನ್ನ ಸದಾನಂದಗೌಡರ ಜೊತೆ ದೂರವಾಣಿ ಮೂಲಕ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸರ್ಕಸ್ ನಡೆಸಿದರು.
ಹೈಕಮಾಂಡ್ ಜೊತೆ ಚರ್ಚೆ ನಡೆಸಿ ಟಿಕೆಟ್ ಬಗ್ಗೆ ಸದಾನಂದಗೌಡರಿಗೆ ವಿಜಯೇಂದ್ರ ಅವರು ಭರವಸೆ ನೀಡಿದ್ದಾರೆ. ಈ ಹಿಂದೆ ಆಪ್ತರನ್ನು ಕಳುಹಿಸಿ ಮನವೊಲಿಕೆ ಮಾಡುವ ಯತ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಡೆಸಿದ್ದರು. ಒಂದು ಕಡೆ, ಬೆಳಗ್ಗೆ ವರಿಷ್ಠರ ಕರೆ ಹಿನ್ನೆಲೆ ಸದಾನಂದ ಗೌಡ ಅವರು ಸುದ್ದಿಗೋಷ್ಠಿ ಮುಂದೂಡಿದರೆ, ಇನ್ನೊಂದೆಡೆ, ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷವು ಸದಾನಂದಗೌಡರನ್ನು ಸಂಪರ್ಕಿಸುತ್ತಿದೆ. ಪಕ್ಷಕ್ಕೆ ಸೆಳೆಯುವ ಪ್ರಯತ್ನ ಒಳ ಒಳಗೆ ನಡೆಸುತ್ತಿದೆ.
ಮಂಗಳೂರು ಕರಾವಳಿ ಭಾಗದಿಂದ ಚಿಕ್ಕಬಳ್ಳಾಪುರದ ಟಿಕೆಟ್ ಆಫರ್ ಪಡೆಯುತ್ತಿರುವ ಎರಡನೇ ರಾಜಕಾರಣಿ ಎಂದರೆ ಅದು ಸದಾನಂದಗೌಡರಾಗಿದ್ದಾರೆ. ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎರಡನೇ ಬಾರಿ ಸೋಲು ಅನುಭವಿಸಿದ್ದರು. ಇದೀಗ ಮಂಗಳೂರು ಭಾಗದ ಸದಾನಂದ ಗೌಡ ಅವರು ಚಿಕ್ಕಬಳ್ಳಾಪುರದ ಟಿಕೆಟ್ ಆಫರ್ ಪಡೆದಿದ್ದಾರೆ. ಆದರೆ, ಇದಕ್ಕೆ ಗೌಡರು ಒಪ್ಪಿಗೆ ಸೂಚಿಸಿಲ್ಲ ಎಂದು ರಾಜಕೀಯ ಮೂಲಗಳಿಂದ ತಿಳಿದುಬಂದಿದೆ.
ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್ ಮತ್ತು ವಿಶ್ವನಾಥ್ ನಡುವೆ ಟಿಕೆಟ್ ಫೈಟ್ ನಡೆಯುತ್ತಿದೆ. ಈ ನಡುವೆ ಕ್ಷೇತ್ರದಲ್ಲಿ ಸದಾನಂದಗೌಡರಿಗೆ ಮಣೆ ಹಾಕಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಉಡುಪಿ-ಚಿಕ್ಕಮಗಳುರು ಕ್ಷೇತ್ರದಲ್ಲಿ ಸಿಟಿ ರವಿ-ಶೋಭ ಕರಂದ್ಲಾಜೆ ನಡುವಿನ ಟಿಕೆಟ್ ಜಟಾಪಟಿ ಹಿನ್ನೆಲೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಟಿಕೆಟ್ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ದಕ್ಕಿತ್ತು. ಇದೇ ರೀತಿ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್-ವಿಶ್ವನಾಥ್ ಇಬ್ಬರ ಜಗಳದಲ್ಲಿ ಸದಾನಂದಗೌಡರಿಗೆ ಟಿಕೆಟ್ ಸಿಗುತ್ತಾ ಎನ್ನುವುದು ತೀವ್ರ ಕುತೂಹಲಕ್ಕೆ ತೆರೆ ಎಳೆದಿದೆ.
ಸದಾನಂದಗೌಡ ಅವರಿಗೆ ಬಿಜೆಪಿ ಹೈಕಮಾಂಡ್ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಫರ್ ನೀಡಿದೆಯಾದರೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ನಡುವೆ ಪೈಪೋಟಿ ನಡೆಯುತ್ತಿದೆ. ಟಿಕೆಟ್ ಸಿಗುವ ವಿಶ್ವಾಸದಲ್ಲಿರುವ ಸುಧಾಕರ್, ಟಿಕೆಟ್ ಘೋಷಣೆಗೂ ಮುನ್ನ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇತ್ತ, ವಿಶ್ವನಾಥ್ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದು, ಕ್ಷೇತ್ರದಲ್ಲಿ ರ್ಯಾಲಿಲಿಗಳ ಮೂಲಕ ಹವಾ ಸೃಷ್ಟಿಸಿದ್ದಾರೆ.
Comments