ದೇಶದಲ್ಲಿ ಮತ್ತೊಮ್ಮೆ ಲೋಕಸಭಾ ಚುನಾವಣೆ ಬಂದಿದೆ. ಹಣ, ಜಾತಿ, ಮತಧರ್ಮದ ಆಮಲನ್ನೇರಿಸಿ ಬಡವರ ಬದುಕನ್ನು ಕಿತ್ತು ತಿನ್ನುವ ಬಂಡವಾಳಗಾರರ ಬಾಲಂಗೋಚಿಯಾಗಿರುವ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ, ಭಾರತದ ಭವಿಷ್ಯವು ಸಂಕಷ್ಟದ ಪ್ರಪಾತ ತಲುಪಲಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಹೇಳಿದರು.
ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸಿಪಿಐಎಂ ಪಕ್ಷದಿಂದ ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ಮುನಿವೆಂಕಟಪ್ಪ ಅವರು ಸ್ಫರ್ಧೆ ಮಾಡಲಿದ್ದು, ನಮ್ಮ ಪಕ್ಷ ಒಂದು ಜನಾಂದೋಲನವಾಗಿದ್ದು, ಯಾವುದೇ ಧರ್ಮ, ಜಾತಿ ಆಧಾರದಲ್ಲಿ ನಾವು ಚುನಾವಣೆ ನಡೆಸುವುದಿಲ್ಲ, ಜನರ ಬದುಕಿಗಾಗಿ ಚುನಾವಣೆ ನಡೆಸುತ್ತೇವೆ ಎಂದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 100 ದಿನಗಳಲ್ಲಿ "ಭೂಮಿ, ಶ್ರಮ, ಬಂಡವಾಳಕ್ಕೆ ಸಂಬಂಧಿಸಿ ಸುಧಾರಣೆ ಮಾಡುವುದಾಗಿ ಪ್ರಕಟಿಸಿದೆ. ಅಂದರೆ ರೈತರಿಂದ ಭೂಮಿ ಕಾರ್ಪೋರೇಟ್ ಕಂಪನಿಗಳಿಗೆ, ಕಾರ್ಮಿಕರ/ನೌಕರರ ಕ್ರಮ ಮತ್ತಷ್ಟು ಲೂಟಿಗೆ, ದೇಶದ ಸಂಪತ್ತನ್ನು ಖಾಸಗಿ ಬಂಡವಾಳಗಾರರಿಗೆ ನೀಡಿ ಎಲ್ಲಾ ಕ್ಷೇತ್ರಗಳಲ್ಲೂ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡುವುದೇ ಆಗಿದೆ. ಇದಕ್ಕಾಗಿ, ಬಿಜೆಪಿ ನೇತೃತ್ವದ ಮೋದಿ ಸರ್ಕಾರವನ್ನು ಸೋಲಿಸಲೇಬೇಕಿದೆ ಎಂದರು.
ಹುಸಿಯಾದ ಬೆಲೆ ಏರಿಕೆ ನಿಯಂತ್ರಣ ಭರವಸೆ:
ಬೆಲೆ ಏರಿಕೆ ನಿಯಂತ್ರಣ ಮಾಡುವುದಾಗಿ ಅಬ್ಬರದ ಪ್ರಚಾರ ಮಾಡಿ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರೂಪಿಸಿದ ನೀತಿಗಳು ಅಗತ್ಯ ವಸ್ತುಗಳ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಗ್ರಾಹಕರ ಬೆಲೆ ಸೂಚ್ಯಾಂಕದಂತೆ 2014 ರ ಮೇ ಗೆ ಹೋಲಿಕೆ ಮಾಡಿದರೆ 2023 ರ ವೇಳೆಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಶೇ 30 ರಷ್ಟು ಏರಿಕೆಯಾಗಿದೆ. 2014 ರಿಂದ 2014 ಕ್ಕೆ ಪೆಟ್ರೋಲ್ ಬೆಲೆ ರೂ.₹64 ರಿಂದ ₹102ಕ್ಕೆ, ಡೀಸೆಲ್ ಬೆಲೆ ರೂ.₹50 ರಿಂದ ರೂ.₹88ಕ್ಕೆ ಹಾಗೂ ಆಡುಗೆ ಸಿಲಿಂಡರ್ ಬೆಲೆ ರೂ.₹410 ರಿಂದ ರೂ.₹10000 ಏರಿಕೆಗೊಂಡಿದೆ. ಸರ್ಕಾರದ ಸಹಾಯಧನಗಳ ಕಡಿತ, ಹಣದುಬ್ಬರದ ಹೆಚ್ಚಳ, ಜಿಎಸ್‌ಟಿ ತೆರಿಗೆ ನೀತಿಗಳ ಪರಿಣಾಮ ಆಹಾರ ಪದಾರ್ಥಗಳು, ಆರೋಗ್ಯ ಔಷಧಿ, ಶಿಕ್ಷಣ, ರಸಗೊಬ್ಬರ, ಇನ್ನಿತರ ಎಲ್ಲಾ ಬೆಲೆಗಳು ದುಬಾರಿಯಾಗುತ್ತಿದೆ. ಆದರೆ ದುಡಿಯುವ ಜನರ ವೇತನ,ಕೂಲಿಯ ಬೆಲೆಗಳಲ್ಲಿ ಇಳಿಕೆಯಾಗಿ ಜನರ ಕೊಂಡುಕೊಳ್ಳುವ ಶಕ್ತಿ ಕುಸಿತಗೊಂಡಿದೆ ಎಂದು ಆರೋಪಿಸಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಏನಾಯಿತು?
2014ರ ಲೋಕಸಭಾ ಚುನಾವಣೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಭರವಸೆ ನೀಡಿತ್ತು. ಆ ಪ್ರಕಾರ 10 ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು. ಆದರೆ CMIE ವರದಿ ಪ್ರಕಾರ 2016ರಲ್ಲಿ ನಿರುದ್ಯೋಗ ಪ್ರಮಾಣ ಶೇ.6.64 ರಷ್ಟಿದ್ದಿದ್ದು 2023ರಲ್ಲಿ ಶೇ.8 ಕ್ಕೆ ಏರಿದೆ. ಅಂದರೆ ಇರುವ ಉದ್ಯೋಗವೇ ನಾಶವಾಗಿದೆ. ಹೊಸ ಉದ್ಯೋಗಗಳೇ ಸೃಷ್ಟಿಯಾಗಿಲ್ಲ. 2014ರಿಂದ 2022 ರ ನಡುವೆ ನಮ್ಮ ದೇಶದಲ್ಲಿ 6 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಖಾಯಂ ಉದ್ಯೋಗಗಳು ನಾಶವಾಗಿ ಕನಿಷ್ಠ ಭದ್ರತೆಯಿಲ್ಲದೆ ಆಸಂಘಟಿತ ಉದ್ಯೋಗ ನಿರ್ಮಾಣವನ್ನು ಮೋದಿ ಸರ್ಕಾರ ನಾಚಿಕೆಯಿಲ್ಲದೆ ಇದು ನಮ್ಮ ಸಾಧನೆ ಎನ್ನುತ್ತಿದೆ ಎಂದು ಕುಟುಕಿದರು.
ಹಸಿವು ಮುಕ್ತ ಭಾರತ ಏನಾಯಿತು ?
ವಿಶ್ವಸಂಸ್ಥೆಯ 5 ಏಜೆನ್ಸಿಗಳು ತಯಾರಿಸಿದ "ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ " ಕುರಿತ 2023 ರ ವರದಿಯು ಶೇ.74.1 ರಷ್ಟು ಭಾರತೀಯರು, ಅಂದರೆ ಸುಮಾರು 100 ಕೋಟಿ ಜನ ಆರೋಗ್ಯಕರ ಆಹಾರವನ್ನು ಸೇವಿಸಲಾಗುತ್ತಿಲ್ಲ ಎಂದಿದೆ. ಆದರೆ ಬಿಜೆಪಿಯ ಮೋದಿ ಸರ್ಕಾರ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ಹೇಳುತ್ತಿದೆ, ಹಾಗಿದ್ದರೆ ಇವರೇ ಹೇಳುವ ರೀತಿಯಲ್ಲಿ 81 ಕೋಟಿ ಬಡ ಜನರಿಗೆ ರೇಷನ್ ಕೊಡುತ್ತಿದ್ದೇವೆ ಎಂದು ಹೇಳುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 125 ಬೇಶಗಳಲ್ಲಿ ಭಾರತವು 111ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಹಲವು ಸ್ವೀರಿ ಯೋಜನೆಗಳಿಗೆ ನಿರಂತರವಾಗಿ ಬಜೆಟ್‌ನಲ್ಲಿ ಹಣದ ಕಡಿತ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಹೆಚ್ಚುವರಿ ರೇಷನ್ ವಿತರಣೆ ಮಾಡಲು ಒಕ್ಕೂಟ ಸರ್ಕಾರವನ್ನು ಕೇಳಿದರೆ, ಆಹಾರ ಧಾನ್ಯಗಳನ್ನು ನೀಡಲು ನಿರಾಕರಿಸಿದ ಮೋದಿ ಸರ್ಕಾರ 29 ರೂಪಾಯಿ ದರದಲ್ಲಿ 'ಭಾರತ ಅಕ್ಕಿ'ಯನ್ನು ಮಾರಾಟ ಮಾಡುತ್ತಿದೆ. ಇದರ ಮೂಲಕ ಜನರ ಹಣವನ್ನು ಖರ್ಚು ಮಾಡಿ ಚುನಾವಣಾ ಪ್ರಚಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚಿದ ಬಡವರ-ಶ್ರೀಮಂತರ ನಡುವಿನ ಅಂತರ:
ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ಎಸ್.ರುದ್ರಾರಾಧ್ಯ ಮಾತನಾಡಿ ವಿಶ್ವ ಅವಮಾನತೆಯ ವರದಿಯು ಭಾರತ 2022 ರಲ್ಲಿ "ಬಡ ಮತ್ತು ಅತ್ಯಂತ ಅಸಮಾನ ದೇಶ" ಎಂದು ಹೇಳಿದೆ. ಬಿಜೆಪಿಯ ಮೋದಿ ಆಡಳಿತದಲ್ಲಿ ನಮ್ಮ ದೇಶದ ಆಸ್ತಿ ಬಂಡವಾಳಗಾರರ ಪಾಲಾಗುತ್ತಿದೆ. ಶ್ರೀಮಂತ ಮೇಲ್‌ಸ್ತರದ ಶೇ.10 ಜನರ ಬಳಿ ಭಾರತದ ಶೇ.77 ರಷ್ಟು ಸಂಪತ್ತು ಸೇರಿಕೊಂಡಿದ್ದರೆ, ಕೆಳಸ್ತರದ ಶೇ.50 ಭಾರತೀಯರ ಬಳಿ ಕೇವಲ ಶೇ 3 ರಷ್ಟು ಸಂಪತ್ತಿದೆ. ಆಸಲಿಗೆ, ಸರ್ಕಾರಕ್ಕೆ ತೆರಿಗೆ ಕಟ್ಟುವವರು ಯಾರು? ಎಂದು ಪ್ರಶ್ನಿಸಿದ ಅವರು, ಶೇ.10 ಶ್ರೀಮಂತರು ಕೇವಲ ಶೇ.3.4 ರಷ್ಟು ತೆರಿಗೆ ಕಟ್ಟಿದರೆ, ಕೆಳಸ್ತರದ ಶೇ.50 ಸಾಮಾನ್ಯ ಜನ ಶೇ.64 ರಷ್ಟು ತೆರಿಗೆ ಕಟ್ಟುತ್ತಾರೆ. ಕೇಂದ್ರ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗಗಳಿಂದ ವಿಪರೀತ ತೆರಿಗೆಗಳನ್ನು ವಸೂಲಿ ಮಾಡಿ ಶ್ರೀಮಂತ ಬಂಡವಾಳಗಾರರಿಗೆ ವರ್ಗಾಯಿಸುತ್ತಿದೆ ಎಂದು ಆರೋಪಿಸಿದರು.
ರೈತರ ಆದಾಯ ದ್ವಿಗುಣ - ಕನಿಷ್ಠ ಬೆಂಬಲ ಬೆಲೆ ಖಾತ್ರಿ ಜಾರಿಗೆ ಬರಲೇ ಇಲ್ಲ:
2022 ರಷ್ಟರಲ್ಲಿ ಎಲ್ಲಾ ರೈತರ ಆದಾಯ ಮಪ್ಪಟ್ಟು ಮಾಡುತ್ತೇವೆ. ಎಲ್ಲಾ ಬೆಳೆಗಳಿಗೂ ಎಂಎಸ್.ಸ್ವಾಮಿನಾಥನ್ ಹೇಳಿದಂತೆ ಕೃಷಿಯ ಸಂಪೂರ್ಣ ವೆಚ್ಚ ಮತ್ತು ಅದರ ಶೇ.50 ರಷ್ಟು ಲಾಭ (C2+50%) ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುತ್ತೇವೆ ಎಂದು ಹೇಳಿದ್ದ ಕೇಂದ್ರದ ಮೋದಿ ಸರ್ಕಾರ ರೈತರಿಗೆ ದ್ರೋಹ ಬಗೆಯಿತು. ಕನಿಷ್ಠ ಬೆಂಬಲ ಬೆಲೆಗೆ ಶಾಸನ ತರಬೇಕೆಂದು ದೆಹಲಿಯಲ್ಲಿ ನಡೆಸಿದ ಹೋರಾಟದಲ್ಲಿ 750ಕ್ಕೂ ರೈತರು ಸಾವನ್ನಪ್ಪಿದ್ದಾರೆ. ಈಗ ರೈತರು ಮತ್ತೆ ಹೋರಾಟ ಆರಂಭಿಸಿದ್ದಾರೆ. ಅರೆಸೇನಾ ಪಡೆಗಳನ್ನು ಬಳಸಿ ರೈತರ ಮೇಲೆ ದಾಳಿ ಮಾಡಲಾಗುತ್ತಿದೆ. ರೈತರೇನು ದೇಶದ ಶತ್ರುಗಳೇ? ಎಂದು ಪ್ರಶ್ನಿಸಿದರು.
ಈ ಸರ್ಕಾರದ ಕಾಲದಲ್ಲಿ ಪ್ರತಿನಿತ್ಯ 30 ರಂತೆ 100474 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಬಜೆಟ್ ನಿರಂತರ ಇಳಿಕೆಯಾಗುತ್ತಿದ್ದು ಈ ವರ್ಷದ ಬಜೆಟ್‌ನಲ್ಲಿ ರ1,000 ಕೋಟಿ ರೂ. ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿದರು.
ಕಾರ್ಮಿಕರ ಹಕ್ಕುಗಳ ದಮನ :
ಜಿಲ್ಲಾ ಸಮಿತಿ ಸದಸ್ಯ ಪಿಎ.ವೆಂಕಟೇಶ್ ಮಾತನಾಡಿ ಮೋದಿ ಸರ್ಕಾರ 2ನೇ ಅವಧಿಗೆ ಅಧಿಕಾರಕ್ಕೆ ಬಂದ ಕೂಡಲೇ ಕೋವಿಡದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಯಾವುದೇ ಚರ್ಚೆ ಮಾಡದೇ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ಕಾರ್ಮಿಕ ವಿರೋಧಿಯಾದ ನಾಲ್ಕು ಸಂಹಿತೆಗಳನ್ನು ರೂಪಿಸಿದೆ. ಆ ಮೂಲಕ ಕೆಲಸದ ಅವಧಿ ಹೆಚ್ಚಳ, ಖಾಯಂ ಕೆಲಸಕ್ಕೆ ತಿಲಾಂಜಲಿ ನೀಡಿ ಗುತ್ತಿಗೆ, ಹಂಗಾಮಿ ಎಫ್.ಟಿ.ಇ., ಮುಂತಾದ ಹೆಸರಿನಲ್ಲಿ ನೇಮಕಕ್ಕೆ ಅನುವು, ಮುಷ್ಕರ, ಸಾಮೂಹಿಕ ಚೌಕಾಸಿ ಹಕ್ಕಿನ ದಮನ, ಮಾಲೀಕರಿಗೆ ಮನಬಂದಂತೆ ಲೇ-ಆಫ್, ರಿಟ್ರೇಜ್‌ಮೆಂಟ್, ಕ್ಲೋಸರ್ ಮಾಡಲು ಅನುವುಗೊಳಿಸಿ ಕಾರ್ಪೋರೆಟ್ ಬಂಡವಾಳಗಾರರಿಗೆ ಅಗ್ಗದ ದರದಲ್ಲಿ ಶ್ರಮದ ಲೂಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ಭಾರತದ ಸಂಪತ್ತಿನ ಲೂಟಿಗೆ ಕಾರ್ಪೊರೇಟ್ ಬಂಡವಾಳಗಾರರಿಗೆ ರಹದಾರಿ :
ದೇಶದ ಸಾರ್ವಜನಿಕ ಸಂಪತ್ತಾದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ಬಂಡವಾಳಗಾರರಿಗೆ ವರ್ಗಾಯಿಸಲು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ (NMP) ಯೋಜನೆ ರೂಪಿಸಿದೆ. ಇದರ ಪ್ರಕಾರ 26,700 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು, 400 ರೈಲ್ವೆ ಸ್ಟೇಷನ್‌ಗಳು, 741 ಕಿ.ಮೀ. ಕೊಂಕಣ್ ರೈಲ್ವೆ, 265 ರೈಲ್ವೆ ಗೂಡ್ಸ್ ಶೆಡ್‌ಗಳು, 90 ಪ್ಯಾಸೆಂಜರ್ ರೈಲುಗಳು, 25 ಪ್ರಮುಖ ವಿಮಾನ ನಿಲ್ದಾಣಗಳು, NTPC NHPC ವಿದ್ಯುತ್ ಉತ್ಪಾದನಾ ಆಸ್ತಿಗಳು. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಗ್ಯಾಸ್ ಅಥಾರಿಟಿಯ ಪೈಪ್‌ಲೈನುಗಳು, ಬಂದರುಗಳು, ಶೇ.39 ರಷ್ಟು ಭಾರತ ಆಹಾರ ನಿಗಮದ ಉಗ್ರಾಣಗಳು. 160 ಕಲ್ಲಿದ್ದಲು ಆಸ್ತಿಗಳು, ಖನಿಜಗಳು, 2.86 ಲಕ್ಷ ಕಿ.ಮೀ. OFC ಕೇಬಲ್‌ಗಳು, ವಿಮಾ ಕ್ಷೇತ್ರ, ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಯ ಕೈಗಾರಿಕೆಗಳು, ಹೀಗೆ ಎಲ್ಲವನ್ನೂ ಖಾಸಗಿಯವರಿಗೆ ಮೂರು ಕಾಸಿಗೆ ದಾನ ಮಾಡಲು ತೀರ್ಮಾನಿಸಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರದ ಇನ್ನೊಂದು ಮುಖವೇ 'ಚುನಾವಣಾ ಬಾಂಡ್:
ಬೃಹತ್ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿ "ಚುನಾವಣಾ ಬಾಂಡ್‌ಗಳ" ಮೂಲಕ ಬಿಜೆಪಿ 6500 ಕೋಟಿ ರೂಗಳನ್ನು ಅಕ್ರಮವಾಗಿ ಗಳಿಸಿದೆ. ಸುಪ್ರೀಂಕೋರ್ಟ್ ಇದನ್ನು ಸಂವಿಧಾನ ವಿರೋಧಿ ಎಂದು ರದ್ದುಗೊಳಿಸಿದೆ. ಚುನಾವಣಾ ಬಾಂಡ್‌ನ್ನು ಮೋದಿ ಸರ್ಕಾರ ತಂದಿದ್ದು ಏಕೆ? ಎಂದು ಪ್ರಶ್ನಿಸಿದ ಅವರು, 2014-2023ರ ನಡುವೆ ಬಂಡವಾಳಗಾರರ ರೂ.15.23 ಲಕ್ಷ ಕೋಟಿ ಬ್ಯಾಂಕ್ ಸಾಲ ಮನ್ನಾ ಮಾಡಲಾಗಿದೆ. ಸಾಲ ಮನ್ನಾ ಮಾಡಿಸಿಕೊಂಡ ಕಂಪನಿಗಳು ಋಣ ತೀರಿಸಲು ಅಕ್ರಮವಾದ ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿಗೆ ದೇಣಿಗೆ ನೀಡುತ್ತಿದೆ. ಇದಕ್ಕಿಂತ ಭ್ರಷ್ಟಾಚಾರದ ಅತ್ಯುನ್ನತ ವಿಧಾನ ಇನ್ನೇನು ಇರಲು ಸಾಧ್ಯ? ಇದು ಮೋದಿಯವರ ಭಾರತ ಎಂದು ವ್ಯಂಗ್ಯವಾಡಿದರು.
ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ವಿದ್ಯುತ್ ಖಾಸಗೀಕರಣದ ತಿದ್ದುಪಡಿ ಕಾಯ್ದೆ ತಾಯಾರಾಗಿದ್ದು, ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಕಾರಣಕ್ಕೆ ಅದನ್ನು ತಡೆ ಹಿಡಿದು ಕೂತಿದೆ. ಒಮ್ಮೆ ಬಿಲ್ ಅಂಗೀಕಾರೌಅದರೆ ರೈತರು, ನೇಕಾರರು ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಂತಹ ಜನ ವಿರೋಧಿ ಸಂವಿಧಾನ ವಿರೋಧಿಗಳನ್ನು ಸೋಲಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನಿವೆಂಕಟಪ್ಪ ಅವರು ನಾಮಪತ್ರ ಸಲ್ಲಿಸಲಿದ್ದು, ಅಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಐದು ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಹಾಗೂ ಕಾರ್ಮಿಕ ಮುಖಂಡರಾದ ರೇಣುಕಾರಾಧ್ಯ, ಸಿಪಿಐಎಂ ತಾಲ್ಲೂಕು ಸಮಿತಿ ಸದಸ್ಯರಾದ ಚೌಡಯ್ಯ ಮಣೀಶ್ ಶರ್ಮ ಉಪಸ್ಥಿತರಿದ್ದರು.
Comments